ಕಿರ್ಲೋಸ್ಕರ

 ಮರಾಠಿ ಮಾಸಪತ್ರಿಕಾ ರಂಗದಲ್ಲಿ ಕ್ರಾಂತಿ ಸಾಧಿಸಿದ ಒಂದು ಪತ್ರಿಕೆ. 1919ರಲ್ಲಿ ಪ್ರಾರಂಭವಾಯಿತು. ಪ್ರಸಿದ್ಧ ಉದ್ಯಮಿ ಶಂಕರರಾವ್ ಕಿರ್ಲೋಸ್ಕರ್ ಇದರ ಸಂಪಾದಕ, ಸಾಮಾನ್ಯ ಉದ್ದೇಶದ ನಿಯತಕಾಲಿಕೆಗೆ ಮರಾಠಿಯಲ್ಲಿ ಈ ಪತ್ರಿಕೆ ಒಂದು ಉದಾಹರಣೆ. ವ್ಯಕ್ತಿಪರಿಚಯ, ಪ್ರವಾಸಕಥನ, ಮೃಗಯಾವಿಹಾರ, ಕಥೆ-ಇವುಗಳೇ ಅಲ್ಲದೆ ಸಮಾಜ, ರಾಜಕಾರಣ, ಶಿಕ್ಷಣ ಮೊದಲಾದ ವಿಷಯಗಳನ್ನು ಕುರಿತ ಲೇಖನಗಳು, ಪ್ರಮುಖ ವಿಚಾರಗಳ ಬಗ್ಗೆ ತಜ್ಞರ ಸಂದರ್ಶನ ಮುಂತಾದವು ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ. ಲಲಿತಸಾಹಿತ್ಯವನ್ನು ನೀಡುವುದರ ಜೊತೆಗೆ ಓದುಗರ ಜ್ಞಾನದಾಹವನ್ನು ತಣಿಸುವ ಕಾರ್ಯವನ್ನೂ ಇದು ಈಡೇರಿಸುತ್ತ ಬಂದಿದೆ. ಲಘುಕಥಾ ಸಾಹಿತ್ಯಕ್ಕೆ ಈ ಪತ್ರಿಕೆ ವಿಶೇಷ ಪ್ರಾಶಸ್ತ್ಯ ನೀಡಿತು. ಮರಾಠಿ ಕಥಾಸಾಹಿತ್ಯಚರಿತ್ರೆಯಲ್ಲಿ ಈ ಪತ್ರಿಕೆಗೆ ಒಂದು ಮಹತ್ತ್ವದ ಸ್ಥಾನವುಂಟು. ಆ ಚರಿತ್ರೆಯಲ್ಲಿ 1945ರ ವರೆಗಿನ ಕಾಲವನ್ನು ಕಿರ್ಲೋಸ್ಕರ ಯುಗ ಎಂದು ಕರೆಯುವಷ್ಟುಮಟ್ಟಿಗೆ ಈ ಪತ್ರಿಕೆ ಕಥಾಸಾಹಿತ್ಯಕ್ಕೆ ದೇಣಿಗೆ ನೀಡಿದೆ, ಸಚಿತ್ರ ಲೇಖನಗಳ ಪ್ರಕಟಣೆಯನ್ನು ಪ್ರಪ್ರಥಮವಾಗಿ ಮರಾಠಿಯಲ್ಲಿ ಪ್ರಾರಂಭಿಸಿದ್ದು ಕಿರ್ಲೋಸ್ಕರ ಪತ್ರಿಕೆಯೇ ಮಾಸಪತ್ರಿಕೆಗಳ ಲೇಖಕರಿಗೆ ಗೌರವಧನ ಕೊಡುವ ಸಂಪ್ರಾದಾಯವನ್ನು ಇದು ರೂಢಿಯಲ್ಲಿ ತಂದಿತು.

ಶಂಕರರಾವ್ ಕಿರ್ಲೋಸ್ಕರ ನುರಿತ ಪತ್ರಿಕೋದ್ಯಮಿ, ಲೇಖಕ, ಚಿತ್ರಕಾರರಲ್ಲಿ ಪ್ರಯೋಗಶೀಲ. ಜನರಲ್ಲಿಯ ಹೊಸತನವನ್ನು ಕಂಡುಹಿಡಿದು ಅದನ್ನು ಓದುಗರಿಗೆ ಕೊಡುವ ಕಾರ್ಯದಲ್ಲಿ ಆತ ನಿಷ್ಣಾತ. ಶಂಕರರಾವ್ ಒಳ್ಳೆಯ ಚಿತ್ರಕಾರ ಕೂಡ. ಮರಾಠಿ ಮಾಸಪತ್ರಿಕೆಗಳಲ್ಲಿ ಕಿರ್ಲೋಸ್ಕರ ಅಗ್ರಸ್ಥಾನ ಪಡೆಯಲು ಶಂಕರರಾವ್ ಬಹಳ ಮಟ್ಟಿಗೆ ಕಾರಣ. ಕಿರ್ಲೋಸ್ಕರದ ಈಗಿನ ಸಂಪಾದಕ ಎಂ.ಎಸ್. ಕಿರ್ಲೋಸ್ಕರ. ತಂದೆ ಶಂಕರರಾವ್ ಹಾಕಿಕೊಟ್ಟ ಮಾರ್ಗದಲ್ಲಿಯೇ ಮಗನ ಸಂಪಾದಕತ್ವದಲ್ಲೂ ಪತ್ರಿಕೆ ಮುಂದುವರಿಯುತ್ತಿದೆ. ಮಹಾರಾಷ್ಟ್ರದಲ್ಲಿ ಇದು ಒಳ್ಳೆಯ ಕೌಟುಂಬಿಕ ಪತ್ರಿಕೆಯೆಂದು ಹೆಸರು ಪಡೆದಿದೆ.

 

(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ